ಜಿóನಿಯ
	ಆಸ್ಟರೇಸೀ ಕುಟುಂಬಕ್ಕೆ ಸೇರಿದ ಪ್ರಸಿದ್ಧ ಅಲಂಕಾರ ಸಸ್ಯ. ಮೆಕ್ಸಿಕೋದ ಮೂಲವಾಸಿ. ಕ್ರ್ಯಾಸಿನ ಪರ್ಯಾಯ ನಾಮ. ಇದರಲ್ಲಿ ಏಕವಾರ್ಷಿಕ ಮತ್ತು ಬಹುವಾರ್ಷಿಕ ಬಗೆಗಳುಂಟು. ಆದರೆ ಉದ್ಯಾನಗಾರಿಕೆಯಲ್ಲಿ ಎಲ್ಲವನ್ನೂ ಏಕವಾರ್ಷಿಕಗಳಂತೆಯೇ ನೋಡಿಕೊಳ್ಳಲಾಗುತ್ತದೆ. ವರ್ಷದ ಎಲ್ಲ ಕಾಲಗಳಲ್ಲಿಯೂ ಬೆಳೆಸಬಹುದಾದ ಇದನ್ನು ಮಡಿಗಳು, ಪಸಲೆ ಅಂಚಿಗಳು ಮತ್ತು ಕುಂಡಗಳಲ್ಲಿ ಬೆಳೆಸುತ್ತಾರೆ. ಹೂಗಳ ವರ್ಣ ಶ್ರೀಮಂತಿಕೆಗೂ ವಿವಿಧತೆಗೂ ಹೆಸರಾಗಿರುವ ಜóನಿಯ ಹೆಚ್ಚು ಕಾಲ ಸಮೃದ್ಧಿಯಾಹಿ ಹೂ ಬಿಡುತ್ತದೆ. ಇದರಿಂದ ಇದು ಬಹು ಜನಪ್ರಿಯವಾಗಿದೆ. ಇದು ಸುಮಾರು 15 ಸೆಂ.ಮೀ. ನಿಂದ 1 ಮೀ. ಎತ್ತರಕ್ಕೆ ಬೆಳೆಯುವ ಮೂಲಿಕೆ. ಎಲೆಗಳು ಸರಳ, ಅಭಿಮುಖ ಮಾದರಿಯಲ್ಲಿ ಜೋಡಣೆ ಗೋಂಡಿವೆ. ಇವುಗಳ ಆಕಾರ ಅಂಡದಂತೆ, ಅಂಚು ನಯ, ಆಸ್ಟರೇಸೀ ಕುಟುಂಬದ ಎಲ್ಲ ಸಸ್ಯದಳಲ್ಲಿರುವಂತೆಯೇ ಜಿóನಿಯದ ಹೂಗಳು ಚಂಡಮಂಜರಿಗಳಲ್ಲಿ ಸಮಾವೇಶಗೊಂಡಿವೆ. ಹೂಗೊಂಚಲು ತಟ್ಟೆಯಂತಿದ್ದು ಅದರ ಅಂಚಿನಲ್ಲಿ ಕದಿರು ಪುಷ್ಟಕಗಳೂ ಕೇಂದ್ರ ಭಾಗದಲ್ಲಿ ಬಿಂಬಪುಷ್ಟಕಗಳೂ ಇವೆ. ಕದಿರುಪುಷ್ಟಕಗಳ ದಳ ಸಮೂಹದ ಬಣ್ಣ ಬಿಳಿ, ಗಂಧಕ ಹಳದಿ, ಹಳದಿ, ಕಿತ್ತಳೆ, ಕೇಸರಿ, ಗುಲಾಬಿ, ಲೈಲಕ್, ಪಾಟಲ, ಊದಾ-ಹೀಗೆ ವೈವಿಧ್ಯಮಯವಾಗಿರುವುದುಂಟು, ಬಿಂಬಪುಷ್ಟಕಗಳು ಸಾಮಾನ್ಯವಾಗಿ ಕಂದುಮಿಶ್ರಿತ ಹಳದಿ ಬಣ್ಣದವು, ಜಿóನಿಯದಲ್ಲಿ ಒಂಟಿ ಸುತ್ತು ದಳಗಳುಳ್ಳ ಬಗೆಗಳೂ ಹಲವಾರು ಸುತ್ತುದಳಗಳುಳ್ಳ ಬಗೆಗಳೂ ಉಂಟು.

ಜಿóನಿಯ ನೀರು ಸರಾಗವಾಗಿ ಬಸಿದುಹೋಗುವಂಥ ಮತ್ತು ಫಲವಂತಿಕೆ ಹೆಚ್ಚಾಗಿರುವ ಯಾವ ತೆರನ ಮಣ್ಣಿನಲ್ಲಾದರೂ ಬೆಳೆಯಬಲ್ಲುದು. ಬಿಸಿಲು ಚೆನ್ನಾಗಿ ಬೀಳುವಂಥ ಸ್ಥಳ ಇದಕ್ಕೆ ಅಗತ್ಯ. ಬೀಜ ಬಿತ್ತುವ ಕಾಲ ಮೈದಾನ ಪ್ರದೇಶಗಳಲ್ಲಿ ಫೆಬ್ರವರಿ-ಮಾರ್ಚ್ ಮತ್ತು ಆಗಸ್ಟ್-ಸೆಪ್ಟೆಂಬರ್; ಗುಡ್ಡಪ್ರದೇಶಗಳಲ್ಲಿ ಮಾರ್ಚ್-ಏಪ್ರಿಲ್. ಬೀಜಗಳನ್ನು ನೇರವಾಗಿ ಮಡಿಗಳಲ್ಲಿ ಬಿತ್ತಬಹುದು ಇಲ್ಲವೆ ಮೊದಲು ಒಟ್ಲುಪಾತಿಗಳಲ್ಲಿ ಬಿತ್ತಿ ಅನಂತರ ಸಸಿಗಳನ್ನು ಬೇಕೆಂದ ಕಡೆಗೆ ನಾಟಿ ಮಾಡಬಹುದು. ನೇರವಾಗಿ ಬಿತ್ತುವಾಗ ಅಥವಾ ನಾಟಿ ಮಾಡುವಾಗ ಗಿಡದಿಂದ ಗಿಡಕ್ಕೆ 20-45 ಸೆಂ.ಮೀ. ಅಂತರವಿರುವಂತೆ ನೋಡಿಕೊಳ್ಳಬೇಕು. ಬಿತ್ತನೆಗೆ ಮಣ್ಣನ್ನು ಸಿದ್ಧಪಡಿಸುವಾಗ ಚೆನ್ನಾಗಿ ಎಲೆಗೊಬ್ಬರ ಮತ್ತು ಕೊಳೆತ ಗೊಬ್ಬರದ ಮಿಶ್ರಣವನ್ನು ಹಾಕಬೇಕು. ನಾಟುಮಾಡಿದ 20-30 ದಿವಸಗಳ ತರುವಾಯ ಅಮೋನಿಯಮ್ ಸಲ್ಫೇಟ್ ಪೊಟ್ಯಾಸಿಯಮ್ ಸಲ್ಫೇಟುಗಳನ್ನು ಚದರ ಮೀಟರಿಗೆ 50 ಗ್ರಾ.ಂ. ಮತ್ತು 28ಗ್ರಾ.ಂ. ಲೆಕ್ಕದಲ್ಲಿ ಹಾಕಬೇಕು. ಇದರಿಂದ ಹೂಗಳ ಗಾತ್ರ ಹೆಚ್ಚುತ್ತದೆ. ಜಿóನಿಯ ಸಮೃದ್ಧವಾಗಿ ಬೆಳೆಯುವ ಮುನ್ನವೇ ಹೂ ಬಿಡಲು ಪ್ರಾರಂಭಿಸುವುದರಿಂದ ಗಿಡಗಳು ಅಂದವಾಗಿ ಕಾಣದಿರಬಹುದು. ಇದನ್ನು ತಡೆದು ಮೊದಲು ಗಿಡ ಚೆನ್ನಾಗಿ ಹರಡಿಕೊಂಡು ಬೆಳೆಯುವಂತೆ ಮಾಡುವುದಕ್ಕಾಗಿ ಮೊದಮೊದಲು ಹುಟ್ಟುವ ಚಿಗುರುಗಳನ್ನು ಚಿವುಟಿ ಹಾಕುವುದು ಉತ್ತಮ. 
ಎಲೆ ಮುದುಡುವ ನಂಜು ರೋಗ ಬಿಟ್ಟರೆ ಜಿûನಿಯಕ್ಕೆ ಹಾನಿಯುಂಟು ಮಾಡುವ ಬೇರೆ ರೋಗಗಳಾಗಲಿ ಕೀಟಗಳಾಗಲಿ ಇಲ್ಲ. ನಂಜು ರೋಗ ಬಂದಾಗ ರೋಗಪೀಡಿತ ಗಿಡಗಳನ್ನು ಕಿತ್ತುಹಾಕಿ ಸುಟ್ಟುಬಿಡುವುದು ಉತ್ತಮ ಮಾರ್ಗ. ಇತ್ತೀಚೆಗೆ ರೋಗನಿರೋಧ ಸಾಮಾಥ್ರ್ಯವುಳ್ಳ ಗಿಡಗಳನ್ನು ಅಭಿವೃದ್ಧಿಪಡಿಸಲಾಗಿದೆ. ಕೆಲವು ಸಲ ಬೂದಿ ರೋಗ, ಸೊರಗು ರೋಗ ಮುಂತಾದವೂ ಜಿûನಿಯವನ್ನು ಪೀಡಿಸುವುದುಂಟು. ಗಂಧಕದ ಪುಡಿಯನ್ನು ಸಿಂಪಡಿಸಿ ಬೂದಿರೋಗವನ್ನು ನಿಯಂತ್ರಿಸಬಹುದು. 
ಜಿûನಿಯದಲ್ಲಿ ಎಲಿಗನ್ಸ್ , ಹಾಗೀನ, ಪಾಸಿಫ್ಲೋರ, ಮಲ್ಟಿಫ್ಲೋರ, ಟಿನುಯಿ ಫ್ಲೋರ, ಲೈನಿಯೇರಿಸ್, ಗ್ರ್ಯಾಂಡಿಫ್ಲೋರ ಎಂಬ ಮುಖ್ಯ ಪ್ರಭೇದಗಳುಂಟು. ಇವುಗಳಲ್ಲಿ ಅತ್ಯಂತ ಪ್ರಮುಖ ಬಗೆಗಳು ಇವು : ಡೇಲಿಯ ಫ್ಲವರ್ಡ್ ಜಿûನಿಯ, ಕ್ಯಾಲಿಫೊರ್ನಿಯನ್ ಜಯಂಟ್, ಸ್ಕೇಬಿಯೋಸ, ಕಟ್-ಅಂಡ್-ಕಮ್ ಎಗೆಯ್ನ್, ಲಿಲಿಪುಟ್ ಅಥವಾ ಪಾಂಪಾನ್, ಹಾಗೀನ ಡಬಲ್ ಮತ್ತು ಟಾಮ್ ತಂಬ್. 
(ಕೆ.ಎನ್.ಆರ್.ಆರ್.)
ಪರಿಷ್ಕರಣೆ ; ಹರೀಶ್‍ಭಟ್
	
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ